ಮಯೂರ ಧ್ವಜ -
	ಮಣಿಪುರದ ರಾಜ. ಧರ್ಮರಾಯ ಅಶ್ವಮೇಧಯಾಗ ಮಾಡುವಾಗ ಬಿಟ್ಟಿದ್ದ ಕುದುರೆಯನ್ನು ಕಟ್ಟಿಹಾಕಿ ಅದನ್ನು ಬಿಡಿಸಿಕೊಳ್ಳಲು ಬಂದ ಅರ್ಜುನನೊಡನೆ ಯುದ್ಧಮಾಡಿ ಅರ್ಜುನನನ್ನು ಸೋಲಿಸಿದ. ಅನಂತರ ಕೃಷ್ಣಾರ್ಜುನರು ಮಾರುವೇಷದಿಂದ ಮಯೂರಧ್ವಜನಲ್ಲಿಗೆ ಹೋಗಿ ಅವನ ಶರೀರವನ್ನು ಎರಡು ಭಾಗ ಮಾಡಿ ತಮ್ಮಿಬ್ಬರಿಗೆ ಹಂಚಿಕೊಡಬೇಕೆಂದು ಕೇಳಿಕೊಂಡರು. ಬ್ರಾಹ್ಮಣರಿಗೆ ವಾಗ್ದಾನಕೊಟ್ಟ ಮಯೂರಧ್ವಜ ಅದರಂತೆ ನಡೆಸಲು ನಿರ್ಧರಿಸಿದ. ತನ್ನ ಮಗನಾದ ತಾಮ್ರಧ್ವಜನನ್ನು ಕರೆದು ತನ್ನ ದೇಹವನ್ನು ಗರಗಸದಿಂದ ಎರಡು ಭಾಗ ಮಾಡುವಂತೆ ಹೇಳಿದ. ಅಲ್ಲೇ ಇದ್ದ ಕೃಷ್ಣ ಮಯೂರ ಧ್ವಜನಸ್ಥಿತಪ್ರಜ್ಞತ್ವಕ್ಕೆ ಮೆಚ್ಚಿ ತನ್ನ ನಿಜರೂಪ ತೋರಿಸಿದ. ಅನಂತರ ಆತನಿಂದ ಅಶ್ವಮೇಧಯಾಗದ ಕುದುರೆಯನ್ನು ಬಿಡಿಸಿಕೊಂಡರು. ಈ ವೃತ್ತಾಂತ ಜೈಮಿನಿ ಭಾರತದಲ್ಲಿ ಬಂದಿದೆ.
(ಎ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ